ತುಮಕೂರು–ರಾಯದುರ್ಗ ಹೊಸ ರೈಲ್ವೆ ಮಾರ್ಗದಲ್ಲಿ ಮೊದಲ ಬಾರಿಗೆ ಪರೀಕ್ಷಾರ್ಥ ಓಡಾಟ ನಡೆಸಿದ ರೈಲು ಭೀಕರ ಅಪಘಾತಕ್ಕೆ ಕಾರಣವಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಯ ಸಂದರ್ಭದಲ್ಲಿ ಆಂಧ್ರಪ್ರದೇಶದ ಕಲ್ಯಾಣದುರ್ಗ ತಾಲೂಕಿನ ನಾರಾಯಣಪುರ ಗೇಟ್ ಬಳಿ ರಾಜಶೇಖರ್ ಎಂಬ ಕುರಿಗಾಹಿಯ 20ಕ್ಕೂ ಹೆಚ್ಚು ಕುರಿಗಳು ರೈಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ. ರೈಲು ಸಂಚಾರ ಇನ್ನೂ ಅಧಿಕೃತವಾಗಿ ಆರಂಭವಾಗದಿದ್ದರೂ, ಕೆ.ರಾಮಪುರ ರೈಲ್ವೆ ನಿಲ್ದಾಣದ ಪರಿಶೀಲನೆಗಾಗಿ ಅಧಿಕಾರಿಗಳು ನಡೆಸಿದ ಪರೀಕ್ಷಾ ಓಟದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕುರಿಗಳು ಹಳಿ ದಾಟುತ್ತಿದ್ದ ಸಮಯದಲ್ಲಿ ರೈಲು ವೇಗವಾಗಿ ಬಂದು ಹತ್ತಿಕೊಂಡ ಪರಿಣಾಮ ದುರಂತ ನಡೆದಿದೆ.