ಮಳವಳ್ಳಿ : ತಾಲ್ಲೂಕಿನ ಬೆಳ್ತೂರು ಗ್ರಾಮದ ಬಳಿಯ ಶಿಂಷಾ ನದಿ ದಂಡೆಯಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಗ್ರಾಮದ ಮಗ್ಗುಲಲ್ಲೇ ಹರಿಯುವ ಶಿಂಷಾ ನದಿ ದಂಡೆ ಯಲ್ಲಿ ಈ ಭಾರಿ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು ಮಂಗಳವಾರ ಬೆಳಿಗ್ಗೆ 10.30 ರ ಸಮಯದಲ್ಲಿ ನದಿಯಿಂದ ಹೊರ ಬಂದ ಈ ಮೊಸಳೆ ನದಿ ದಂಡೆಯ ಮರಳಿನ ಮೇಲೆ ಮಲಗಿ ಬಿಸಿಲು ಕಾಯುತ್ತಿ ರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ನದಿಯಲ್ಲಿ ಮೊಸಳೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ವಾದರೂ ನದಿ ದಂಡೆಯ ಮೇಲೆ ಬಂದ ಮೊಸಳೆ ವಿರಾಜಮಾನ ವಾಗಿ ಬಿಸಿಲು ಕಾಯುತ್ತ ಮಲಗಿರುವ ಈ ದೃಶ್ಯ ಅಪರೂಪ ವಾದದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.