ಬೆಂಗಳೂರು ಉತ್ತರ: ವಾಟಾಳ್ ಕನ್ನಡದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಹೋರಾಟಗಾರ: ನಗರದಲ್ಲಿ ಸಿ.ಎಂ
ವಾಟಾಳ್ ಕನ್ನಡದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಹೋರಾಟಗಾರರು. ದೇವರಾಜ ಅರಸು ಅವರು ಮಂತ್ರಿ ಸ್ಥಾನ ಕೊಡ್ತೀನಿ ಎಂದು ಕರೆದರೂ ಕನ್ನಡ ಪಕ್ಷ ಮತ್ತು ಕನ್ನಡ ಹೋರಾಟ ಬಿಡಲು ವಾಟಾಳ್ ಅವರು ಒಪ್ಪಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ವುಗೆ ವ್ಯಕ್ತಪಡಿಸಿದರು. ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಭುವನೇಶ್ವರಿ ಹಾಗೂ ಅಣ್ಣಮ್ಮ ದೇವತೆಯ ವೈಭವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಾವೆಲ್ಲರೂ ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನ, ಪ್ರೀತಿ ಬೆಳೆಸಿಕೊಳ್ಳಬೇಕು. ನಮ್ಮ ನೆಲದಲ್ಲಿ ಕನ್ನಡದ ವಾತಾವರಣ ಬೆಳೆಸಬೇಕು. ಇದಕ್ಕಾಗಿ ಯಾರು ಯಾವುದೇ ಭಾಷೆಯಲ್ಲಿ ಮಾತನಾಡಿದರೂ ನೀವು ಕನ್ನಡದಲ್ಲೇ ಉತ್ತರ ಕೊಡಬೇಕು ಎಂದು ಕರೆ ನೀಡಿದರು.