ಬಸವ ಭವನ ನಿರ್ಮಾಣ ಸಂಬಂಧ ಜಟಾಪಟಿ ಏರ್ಪಟ್ಟು ಪ.ಜಾತಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯಡಿ 12 ಮಂದಿ ವಿರುದ್ಧ ಕೇಸ್ ದಾಖಲಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ. ಬೆಳವಾಡಿ ಗ್ರಾಮದ ಶಿವಬಸಪ್ಪ, ನಂಜಪ್ಪ, ಗವಿಯಪ್ಪ, ಶಂಕರಪ್ಪ, ಗವಿಸ್ವಾಮಿ ಸೇರಿ ಒಟ್ಟು 12 ಮಂದಿ ವಿರುದ್ಧ ದೇಶಯ್ಯ ಎಂಬವರು ಕೊಟ್ಟ ದೂರಿನ ಅನ್ವಯ ಗುಂಡ್ಲುಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಗ್ರಾಮದ ಎಲ್ಲಾ ಸಮುದಾಯಗಳಿಗೆ ಸೇರಿದ ಗವಿರುದ್ರೇಶ್ವರ ದೇವಾಲಯ ಜಾಗದಲ್ಲಿ ಬಸವ ಭವನ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು ಕೇಳಿದ್ದಕ್ಕೆ ಕೊಲೆ ಬೆದರಿಕೆ ಹಾಕಿ, ಜಾತಿನಿಂದನೆ ಮಾಡಿದ್ದಾರೆಂದು ದೂರು ಕೊಡಲಾಗಿದೆ. ಗುರುವಾರ ಅಷ್ಟೇ ಬಸವ ಭವನ ನಿರ್ಮಾಣ ಮಾಡಲು ಶಾಸಕ ಗಣೇಶ್ ಪ್ರಸಾದ್ ಗುದ್ದಲಿ ಪೂಜೆ ನೆರವೇರಿಸಿದ್ದರು.