ಮಳವಳ್ಳಿ : ತಾಲೂಕು ಬೆಳಕವಾಡಿ ಗ್ರಾಮದ ದೊಡ್ಡ ಕೆರೆಯನ್ನು ಹೂಳೆತ್ತುವಂತೆ ಜವನಗಹಳ್ಳಿ. ಬೆಳಕವಾಡಿ, ಹೊಸಹಳ್ಳಿ ಗ್ರಾಮಸ್ಥರು ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮಳವಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಗುರುವಾರ ಮಧ್ಯಾಹ್ನ 3.30 ರ ಸಮಯದಲ್ಲಿ ತಾಲ್ಲೂಕು ಕಛೇರಿ ಮುಂದೆ ನೆರೆದು ಘೋಷಣೆಗಳನ್ನು ಕೂಗಿದರು. ಈ ಕೆರೆಯಿಂದ ನೂರಾರು ಕುಟುಂಬಗಳು ತಮ್ಮ ಜಮೀನಿನಲ್ಲಿ ಭತ್ತ, ರಾಗಿ, ಜೋಳ, ನೆಲಗಡಲೆ ಇತರೆ ಆಹಾರ ಧಾನ್ಯಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ನೂರಾರು ವರ್ಷಗಳ ಇತಿಹಾಸ ಇರುವ ಈ ಕೆರೆಗೆ ಬೆಳಕವಾಡಿ ಗ್ರಾಮದ ಯು.ಜಿ.ಡಿ. ನೀರು, ಚರಂಡಿ ನೀರು, ಕಸ ಕಡ್ಡಿ ಮತ್ತು ಸತ್ತ ಪ್ರಾಣಿಗಳು, ಕೋಳಿ ಕ್ರೀನಿಂಗ್ ವೇಸ್ಟ್ ಹಾಕಲಾಗುತ್ತಿದೆ ಎಂದು ದೂರಿದರು.