ಗಡಿಜಿಲ್ಲೆ ಚಾಮರಾಜನಗರದಲ್ಲಿ ದೇಗುಲ ಹುಂಡಿ ಹಣ ಕದಿಯುತ್ತಿರುವ ಪ್ರಕರಣಗಳು ಮುಂದುವರೆದಿದ್ದು ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಾಮುಂಡೇಶ್ವರಿ ದೇವಾಲಯದಲ್ಲಿ ಖದೀಮರು ಹುಂಡಿ ಹಣ ಎಗರಿಸಿದ್ದಾರೆ. ಅಂಬಳೆ ಗ್ರಾಮದ ಚಾಮುಂಡೇಶ್ವರಿ ದೇಗುಲದ ಬಾಗಿಲನ್ನು ಒಡೆದು ಒಳ ನುಗ್ಗಿರುವ ಕಳ್ಳರು ಎರಡು ದೊಡ್ಡ ಗೋಲಕಗಳನ್ನು ಒಡೆದು ಹಣ ಕದ್ದಿದ್ದಾರೆ. ಜೊತೆಗೆ, ದೇವರ ಮೇಲಿದ್ದ 4 ಗ್ರಾಂ ಚಿನ್ನಾಭರಣ ಕೂಡ ಎಗರಿಸಿದ್ದಾರೆ. ಖತರ್ನಾಕ್ ಗಳು ಪಕ್ಕಾ ಪ್ಲಾನ್ ಮಾಡಿ ಹುಂಡಿಗೆ ಕನ್ನ ಹಾಕಿದ್ದು ದೇವಾಲಯದಲ್ಲಿ ಅಳವಡಿಸಿದ್ದ ಸಿಸಿಟಿವಿಯ ಎಲ್ಲಾ ವೈರ್ ಗಳನ್ನು ತುಂಡರಿಸಿ ಸಿಸಿಟಿವಿ ಡಿವಿಆರ್ ಹೊತ್ತೊಯ್ದಿದ್ದಾರೆ. ಸ್ಥಳಕ್ಕೆ ಯಳಂದೂರು ಪೊಲೀಸರು ಭೇಟಿ ಕೊಟ್ಟು ತನಿಖೆ ಕೈಗೊಂಡಿದ್ದಾರೆ.