ರೈತರ ಜಮೀನುಗಳಲ್ಲಿ ಕೇಬಲ್ ಕಳ್ಳತನ ಮಾಡಿ ಸಾಗಣೆ ಮಾಡುತ್ತಿದ್ದ ಮೂವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ಮೈಸೂರು ಮೂಲದ ಸಲೀಂಪಾಷ ಹಾಗೂ ಇನ್ನಿಬ್ಬರು ಅಪ್ರಾಪ್ತರು ಪೊಲೀಸರ ವಶದಲ್ಲಿದ್ದಾರೆ. ಇವರು ಗೋಪಾಲಪುರ ಸಮೀಪದ ಲಕ್ಕೀಪುರ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಆಟೋದಲ್ಲಿ ಓಡಾಡುತ್ತಿದ್ದನ್ನು ಕಂಡ ಸ್ಥಳೀಯರು ಹಿಡಿದು ವಿಚಾರಿಸಿದಾಗ ಓರ್ವ ಸತ್ಯ ಬಾಯಿಬಿಟ್ಟಿದ್ದಾನೆ. ಕೃತ್ಯದಲ್ಲಿ ನಾಲ್ವರು ಭಾಗಿಯಾಗಿದ್ದು, ಓರ್ವ ತಪ್ಪಿಸಿಕೊಂಡಿದ್ದಾನೆ. ಈ ಸಂಬಂಧ ಮೂವರು ಆರೋಪಿಗಳು ಹಾಗೂ ಆಟೊವನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.